1,494 ಕೋಟಿ ಸಂಚಿತ ನಿಧಿ ದುರ್ಬಳಕೆ; ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು!

Waves of Karnataka


 ವಾಲ್ಮೀಕಿ ನಿಗಮ ಅಕ್ರಮ, ಮುಡಾ ನಿವೇಶನ ಹಗರಣದ ಬೆನ್ನಲ್ಲೇ ರಾಜ್ಯ ಸರ್ಕಾರದಲ್ಲಿ ಮತ್ತೊಂದು ಭಾರಿ ಹಗರಣ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. 2022-23ನೇ ಸಾಲಿನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಬಳಕೆಯಾಗದೆ ಉಳಿದಿರುವ 1,494 ಕೋಟಿ ರೂ.ಗಳ ಬಗ್ಗೆ ಪತ್ರ ಬರೆದಿದ್ದರೂ ರಾಜ್ಯ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯ ಸಂಚಿತ ನಿಧಿಗೆ ಸೇರಬೇಕಾದ ಸಾವಿರಾರು ಕೋಟಿ ರೂ.ಗಳು ದುರ್ಬಳಕೆಯಾಗಿದ್ದು (Consolidated Fund Misuse), ಈ ಬಗ್ಗೆ ತನಿಖೆಗೆ ಕ್ರಮ ಕೈಗೊಂಡು ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಜ್ಯಪಾಲರಿಗೆ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ದೂರು ನೀಡಿದ್ದಾರೆ.

2023ರ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ನಿಧಿ-IIರಲ್ಲಿ ಖರ್ಚು ಮಾಡದೆ ಬಾಕಿ ಇರುವ ಹಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು, ಬಳಕೆಯಾಗದ ಜಿಲ್ಲಾ ಪಂಚಾಯಿತಿಗಳ 459 ಕೋಟಿ ಹಾಗೂ ತಾಲೂಕು ಪಂಚಾಯಿತಿಗಳ 1,494 ಕೋಟಿ ರೂ.ಗಳನ್ನು ಸಂಚಿತ ನಿಧಿಗೆ ಜಮಾ ಮಾಡಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದರು. ಆದರೆ, ಇದನ್ನು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿಯವರು ನೀಡಿದ ಉತ್ತರ ಸುಳ್ಳು ಎಂದು ಸಾಬೀತಾಗಿದೆ.