ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಯು ಮಹಾಭಾರತದಲ್ಲಿ ದೌಪದಿಯ ವಸ್ತ್ರಾಪಹರಣಕ್ಕಿಂತಲೂ ಇದು ಕ್ರೂರ ಕೃತ್ಯವಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ

Waves of Karnataka


 ಬೆಳಗಾವಿ ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಯು ಮಹಾಭಾರತದಲ್ಲಿ ದೌಪದಿಯ ವಸ್ತ್ರಾಪಹರಣಕ್ಕಿಂತಲೂ ಇದು ಕ್ರೂರ ಕೃತ್ಯವಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಘಟನೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು, ಸ್ವಾತಂತ್ರ್ಯಾನಂತರವೂ ಇಂತಹ ಘಟನೆ ನಡೆದಿರುವುದಕ್ಕೆ ನಾಚಿಕೆಯಿಂದ ತಲೆತಗ್ಗಿಸಬೇಕಿದೆ ಎಂದು ಕಿಡಿಕಾರಿದೆ.

ಸಂತ್ರಸ್ತೆಯ ಪುತ್ರ ತನ್ನದೇ ಸಮುದಾಯದ ಯುವತಿಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. “ಈ ಸಂದರ್ಭದಲ್ಲಿ ತಕ್ಷಣ ಪೊಲೀಸರು ಸಂತ್ರಸ್ತೆಯ ನೆರವಿಗೆ ಏಕೆ ಧಾವಿಸಲಿಲ್ಲ. ಮೊದಲಿಗೆ ಇಂಥ ಘಟನೆ ನಡೆಯುವುದಕ್ಕೆ ಅವಕಾಶ ನೀಡಿದ್ದಾದರು ಹೇಗೆ?” ಎಂದು ಖಾರವಾಗಿ ಪೀಠವು ಸರ್ಕಾರವನ್ನು ಪ್ರಶ್ನಿಸಿತು.