ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಕೊನೆಗೂ ಸಮಯ ನಿಗದಿಯಾಗಿದೆ.

Waves of Karnataka


 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಕೊನೆಗೂ ಸಮಯ ನಿಗದಿಯಾಗಿದೆ.
ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಳಗ್ಗೆ 11 ಗಂಟೆಗೆ ಭೇಟಿ ಮಾಡಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಕರ್ನಾಟಕವು ಕೇಂದ್ರದಿಂದ 18,171.44 ಕೋಟಿ ರೂಪಾಯಿ ಬರ ಪರಿಹಾರ ಕೋರಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನಿಧಿಯಡಿ ಕರ್ನಾಟಕವು ಇಷ್ಟು ಪರಿಹಾರಕ್ಕೆ ಅರ್ಹವಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬರ ಪರಿಹಾರಕ್ಕೆ ಕೇಂದ್ರದಿಂದ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ ಎಂದು ಪ್ರಧಾನಿಯನ್ನು ಟೀಕಿಸುತ್ತಿದ್ದ ಸಿದ್ದರಾಮಯ್ಯ, ಕರ್ನಾಟಕದ ಸಚಿವರು ಭೇಟಿ ಮಾಡಲು ಯತ್ನಿಸಿದರೂ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರು.

ರಾಜ್ಯ ಸರ್ಕಾರವು ರೈತರಿಗೆ ಸಹಾಯ ಮಾಡಲು ತಕ್ಷಣದ ಕ್ರಮವಾಗಿ ಆರ್ಥಿಕ ಸಹಾಯದ ಮೊದಲ ಕಂತಾಗಿ ಪ್ರತಿ ರೈತರಿಗೆ 2,000 ರೂಪಾಯಿಗಳನ್ನು ನೀಡುವುದಾಗಿ ಪ್ರಕಟಿಸಿದೆ. ಬೆಳಗಾವಿ ಅಧಿವೇಶನದಲ್ಲಿ, ರೈತರು ಅಸಲು ಮೊತ್ತವನ್ನು ಪಾವತಿಸಿದರೆ ರಾಜ್ಯ ಸರ್ಕಾರವು ಕೃಷಿ ಸಾಲದ ಮೇಲಿನ ಬಡ್ಡಿ ಪಾವತಿಯನ್ನು ಮನ್ನಾ ಮಾಡುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಸರ್ಕಾರವು 236 ರಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ ಮತ್ತು 48.19 ಲಕ್ಷ ಹೆಕ್ಟೇರ್‌ಗಳಲ್ಲಿನ ಬೆಳೆ ನಷ್ಟವು 40,000 ಕೋಟಿ ರೂಪಾಯಿ ಎಂದು ಅಂದಾಜಿಸಿದೆ.