ಕೋಗಿಲು ನಿರಾಶ್ರಿತರಿಗೆ ಮನೆಗಳನ್ನು ಒದಗಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜನವರಿ 5 ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕ ಗುರುವಾರ ಘೋಷಿಸಿದೆ.
ಬಿಜೆಪಿಯ ಸತ್ಯಶೋಧನಾ ಸಮಿತಿ ಸಭೆಯ ನಂತರ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ಕೋಗಿಲು ಅಕ್ರಮ ಮನೆ- ಗುಡಿಸಲುಗಳ ತೆರವು ಪ್ರಕರಣದಲ್ಲಿ ವಾಸಸ್ಥಳ ಕಳಕೊಂಡವರಿಗೆ ಮನೆ ನೀಡಲು ಮುಂದಾದ ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ಜನವರಿ 5 ರಂದು ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದ್ದೇವೆಂದು ಹೇಳಿದರು.
ಕೋಗಿಲುವಿನಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದ ಕುರಿತು ಸತ್ಯಾಸತ್ಯತೆ ತಿಳಿಯಲು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು 5 ಜನರ ಸಮಿತಿ ರಚಿಸಿದ್ದಾರೆ. ಅದರ ಮೊದಲ ಸಭೆ ಇಂದು ನಡೆದಿದೆ. ಸ್ಥಳ ಪರಿಶೀಲನೆಯನ್ನೂ ಮಾಡಲಿದ್ದೇವೆ. ಅಲ್ಲಿನ ಸರ್ವೇ ನಂಬರ್, ಯಾವ ರಾಜ್ಯದವರು, ಯಾವ ದೇಶದವರು ಎಂಬಿತ್ಯಾದಿ ಮಾಹಿತಿಯನ್ನು ಸಂಗ್ರಹಿಸಲಿದ್ದೇವೆ. ಒಂದು ವಾರದಲ್ಲಿ ಈ ಸಂಬಂಧ ರಾಜ್ಯಾಧ್ಯಕ್ಷರಿಗೆ ವರದಿ ಕೊಡುತ್ತೇವೆಂದಿು ತಿಳಿಸಿದರು.
