ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು, ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಮುಧೋಳದ ಸಕ್ಕರೆ ಕಾರ್ಖಾನೆಯ ಯಾರ್ಡ್ʼನಲ್ಲಿ ನಿಂತಿದ್ದ ಕಬ್ಬು ತುಂಬಿದ್ದ ಟ್ರಾಕ್ಟರುಗಳು ಬೆಂಕಿಗೆ ಆಹುತಿ ಆಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಟೀಕಿಸಿದರು.
ಬೆಳಗಾವಿಯಲ್ಲಿ ರೈತರು ಹೋರಾಟಕ್ಕಿಳಿದಾಗ ಆ ಕ್ಷಣಕ್ಕೇನೋ ಅವರ ಮೂಗಿಗೆ ತುಪ್ಪ ಸವರಿದ ಸರ್ಕಾರ, ಇಡೀ ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಘೋರ ವೈಫಲ್ಯ ಕಂಡಿತು. ಅದರ ಪರಿಣಾಮವೇ ಮುಧೋಳದಲ್ಲಿ ರೈತರ ತಾಳ್ಮೆಯ ಕಟ್ಟೆಯೊಡೆಯುಂತೆ ಮಾಡಿದೆ ಎಂದು ಹೇಳಿದರು.
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅನ್ನುವ ಲಾಭಕೋರ ಧೋರಣೆಯನ್ನು ಸರ್ಕಾರ ಬಿಡಬೇಕು. ರೈತರ ಸಂಕಷ್ಟವನ್ನು ಅಧಿಕಾರದ ಅಮುಲುಗಣ್ಣಿನಿಂದ ನೋಡಬಾರದು. ಹೃದಯ ವೈಶಾಲ್ಯದಿಂದ ಕಾಣುವ ಔದಾರ್ಯ ತೋರಬೇಕು. ಮುಧೋಳದ ರೈತರ ಜತೆ ನಾನೂ ಇದ್ದೇನೆಂದು ತಿಳಿಸಿದ್ದಾರೆ.
