ರೈತರನ್ನು ಒಕ್ಕಲೆಬ್ಬಿಸುವುದಿಲ್ಲ; ರಾಜಕೀಯ ಉದ್ದೇಶದಿಂದ ರಾಜ್ಯಕ್ಕೆ ಜೆಪಿಸಿ ಭೇಟಿ: ಡಿ.ಕೆ ಶಿವಕುಮಾರ್

Waves of Karnataka


 ವಕ್ಫ್ ವಿವಾದ ಬಿಜೆಪಿ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ವಕ್ಫ್ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷರ ಭೇಟಿ ಬಗ್ಗೆ ಕೇಳಿದಾಗ, ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಈ ವಿವಾದ ಸೃಷ್ಟಿಸಿದೆ. ರಾಜ್ಯದ ಆಸ್ತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವಕ್ಫ್ ಆಸ್ತಿ ವಿಚಾರವಾಗಿ ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ 2019ರಿಂದ ಮೊದಲು ನೋಟೀಸ್ ಕೊಟ್ಟಿದ್ದು ಬಿಜೆಪಿ. ಬೊಮ್ಮಾಯಿ ಅವರ ಸರ್ಕಾರವೇ ನೋಟೀಸ್ ನೀಡಿದೆ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಜನ ಶಾಂತಿಯುತವಾಗಿರುವುದು ಬೇಕಾಗಿಲ್ಲ.

ಮಹಾರಾಷ್ಟ್ರ ಹಾಗೂ ರಾಜ್ಯದ ಉಪಚುನಾವಣೆ ಸಮಯದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಜನ ಬಹಳ ಬುದ್ಧಿವಂತರು ಅವರಿಗೆ ಜನ ತಕ್ಕ ರೀತಿ ಪಾಠ ಕಲಿಸಲಿದ್ದಾರೆ. ನಾವು ದಾಖಲೆಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ರೈತರನ್ನು ರಕ್ಷಣೆ ಮಾಡುತ್ತೇವೆ. ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ" ಎಂದರು