ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಹಿಂದಿನ ಬಿಜೆಪಿ ಸರ್ಕಾರದಿಂದ ಅನುಮತಿ ನೀಡಲಾಗಿತ್ತು. ಆದರೆ ಹಾಲಿ ಕಾಂಗ್ರೆಸ್ ಸರ್ಕಾರವು ಇದನ್ನು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಸಿಬಿಐ ರಿಟ್ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಎರಡು ಕಡೆಯ ವಕೀಲರಿಂದ ವಾದ-ಪ್ರತಿವಾದ ಆಲಿಸಲಾಗಿದೆ. ಪಿಸಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿಲಾಗಿತ್ತು. ಇದು ಸರ್ಕಾರ ಮತ್ತು ಸಿಬಿಐ ನಡುವಿನ ವಿವಾದವಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ. ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ವಿವಾದ ಸುಪ್ರೀಂ ಕೋರ್ಟ್ ತೀರ್ಮಾನಿಸಬೇಕು. ಹೈಕೋರ್ಟ್ ತೀರ್ಮಾನಿಸುವುದು ಸೂಕ್ತವಲ್ಲವೆಂದು ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್, ಉಮೇಶ್ ಎಂ.ಅಡಿಗ ಅವರ ಪೀಠ ತೀರ್ಪು ನೀಡಿದೆ. ಇದರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
