ಬಿಜೆಪಿ ಸರ್ಕಾರದಲ್ಲಿ ಅಷ್ಟೆ ಅಲ್ಲ, ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮಿಷನ್ ಕಾಟ ಕಡಿಮೆ ಆಗಿಲ್ಲ ಎಂದು ದೂರಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

Waves of Karnataka


 ಬಿಜೆಪಿ ಸರ್ಕಾರದಲ್ಲಿ ಅಷ್ಟೆ ಅಲ್ಲ, ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮಿಷನ್ ಕಾಟ ಕಡಿಮೆ ಆಗಿಲ್ಲ ಎಂದು ದೂರಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಸಮಿತಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಕಮಿಷನ್ ಬಗ್ಗೆ ಬರೋಬ್ಬರಿ 6 ಸಾವಿರ ಪುಟಗಳ ಮಾಹಿತಿಯನ್ನು ಸಮಿತಿಗೆ ನೀಡಿರುವ ಕೆಂಪಣ್ಣ, ಕಮಿಷನ್‌ನೀಡಿದವರಿಗೆ ಮಾತ್ರ ಬಿಲ್ ಮಾಡಿಕೊಡುತ್ತಿರುವ ಮಾಹಿತಿಯನ್ನು ಒದಗಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಹಿಂದಿನ ಮತ್ತು ಹಾಲಿ ಸರ್ಕಾರದಲ್ಲಿ ಏನೇನು ನಡೆದಿದೆ ಮತ್ತು ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಕಲೆ ಹಾಕಿರುವ ಕೆಂಪಣ್ಣ, ಈ ಬಗ್ಗೆ ಆಡಿಯೊ ಮತ್ತು ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಸಲ್ಲಿಸಿರುವುದು ವಿಶೇಷವಾಗಿದೆ.
ಹಿರಿತನದ ಆಧಾರದ ಮೇಲೆ ಬಿಲ್ ಪಾವತಿ ಮಾಡಿದರೆ ಸಮಸ್ಯೆ ಇರುವುದಿಲ್ಲ. ಸದಾ ಹಿರಿತನವನ್ನು ಉಲ್ಲಂಸಿ ಬಿಲ್ ಮಾಡಿದರೆ ಕಮಿಷನ್‌ಗೆ ಕಡಿವಾಣ ಹಾಕಲು ಹೇಗೆ ಸಾಧ್ಯ? ಎನ್ನುವುದನ್ನು ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಮುಂದೆ ಕೆಂಪಣ್ಣ ಎಳೆಎಳೆಯಾಗಿ ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೊದಲ ಹಂತದಲ್ಲಿ ಒಂದಷ್ಟು ದಾಖಲೆಗಳನ್ನು ಸಲ್ಲಿಸಿದ್ದ ಕೆಂಪಣ್ಣ, ಈಗ ಇನ್ನಷ್ಟು ದಾಖಲೆಗಳನ್ನು ಒದಗಿಸಿದ್ದಾರೆ. ಇನ್ನಷ್ಟು ದಾಖಲೆಗಳನ್ನು ಒದಗಿಸಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಸಮಿತಿ ಮುಂದೆ ವಿನಂತಿಸಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಸಮಿತಿಗೆ ದಾಖಲೆ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಂಪಣ್ಣ, ಕಮಿಷನ್ ಹಾವಳಿಯಿಂದ ರಾಜ್ಯದಲ್ಲಿ ಗುತ್ತಿಗೆದಾರರು ಏನೇನು ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದೇನೆ ಎಂದು ಹೇಳಿದರು.
ಗುತ್ತಿದಾರರಿಗೆ ಬರಬೇಕಾಗಿರುವ ಬಾಕಿ ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ ಸರ್ಕಾರ, ಹಿರಿತನದ ಆಧಾರದ ಮೇಲೆ ಪಾವತಿ ಮಾಡುತ್ತಿಲ್ಲ. ಇದು ಹಿಂದಿನ ಸರ್ಕಾರ ಮತ್ತು ಈ ಸರ್ಕಾರದಲ್ಲಿಯೂ ಇದೇ ಸ್ಥಿತಿ ಮುಂದುವರಿದಿದೆ ಎಂದರು.