ರಾಜ್ಯಸಭೆಯಿಂದ ಅಮಾನತುಗೊಂಡ ಒಟ್ಟು 141 ಸಂಸದರು ಸಂಸತ್ತಿನ ಚೇಂಬರ್, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸದಂತೆ ಸುತ್ತೋಲೆಯಲ್ಲಿ ತಿಳಿಸಿದೆ.

Waves of Karnataka

 

ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಂಡ ಸಂಸದರಿಗೆ ಲೋಕಸಭೆ ಸಚಿವಾಲಯ ನೋಟಿಸ್ ಜಾರಿ ಮಾಡಿದೆ. ಲೋಕಸಭೆಯಿಂದ ಮತ್ತು ರಾಜ್ಯಸಭೆಯಿಂದ ಅಮಾನತುಗೊಂಡ ಒಟ್ಟು 141 ಸಂಸದರು ಸಂಸತ್ತಿನ ಚೇಂಬರ್, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸದಂತೆ ಸುತ್ತೋಲೆಯಲ್ಲಿ ತಿಳಿಸಿದೆ.

ಸಂಸತ್​ ಭವನದಲ್ಲಿ ಡಿಸೆಂಬರ್ 13ರಂದು ಉಂಟಾದ ಭದ್ರತಾ ಲೋಪ ಕುರಿತು ಚರ್ಚೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ವಿವಿಧ ಪಕ್ಷಗಳ ಸದಸ್ಯರನ್ನು ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಉಭಯ ಸದನಗಳಿಂದ ಅಮಾನತುಗೊಳಿಸಲಾಗಿತ್ತು. ಇದರ ಬೆನ್ನಲೆ ಲೋಕಸಭೆ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಅಮಾನತುಗೊಂಡ ಎಲ್ಲ ಸಂಸದರು ಈ ಅವಧಿಯಲ್ಲಿ ಸಂಸತ್ತಿ ಮೊಗಸಾಲೆ, ಗ್ಯಾಲರಿ ಮತ್ತು ಕೋಣೆಗಳಿಗೆ ಪ್ರವೇಶಿಸಲು ನಿಷೇಧವಿದೆ ಎಂದು ತಿಳಿಸಿದೆ.

ಅಲ್ಲದೇ, ಯಾವುದೇ ಸಂಸದೀಯ ಸಮಿತಿಯ ಸಭೆಗೆ ಹಾಜರಾಗಲು ಅವರಿಗೆ ಅವಕಾಶವಿರಲ್ಲ. ಅಮಾನತು ಅವಧಿಯಲ್ಲಿ ಅವರು ಯಾವುದೇ ಸೂಚನೆ ನೀಡುವಂತಿಲ್ಲ. ತಮ್ಮ ಅಮಾನತು ಅವಧಿಯಲ್ಲಿ ನಡೆದ ಸಮಿತಿಗಳಿಗೆ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಅಧಿವೇಶನದ ಉಳಿದ ಅವಧಿಗೆ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಿದರೆ, ಅವರು ಅಮಾನತು ಅವಧಿಯಲ್ಲಿ ದೈನಂದಿನ ವೇತನದ ಭತ್ಯೆಗೆ ಅರ್ಹರಾಗಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.